ಕಾವ್ಯ ರೂಪಕಗಳು 

ಪದ್ಯಶೈಲಿಯಲ್ಲಿ ರಚಿತವಾದ ನಾಟಕಗಳನ್ನು ಕಾವ್ಯರೂಪಕಗಳು (ಪೊಯಟಿಕ್ ಡ್ರಾಮಾಸ್) ಎನ್ನಲಾಗಿದೆ. ಇಲ್ಲಿ ಅವುಗಳ ಸ್ವರೂಪ, ಚರಿತ್ರೆ, ಅಗತ್ಯಗಳ ಬಗ್ಗೆ ವಿವರಗಳಿವೆ.

ನಾಟಕ ಯಶಸ್ವಿಯಾಗಬೇಕಾದರೆ ವಸ್ತುವಿನ್ಯಾಸ, ಪಾತ್ರಸೃಷ್ಟಿ, ನಟನಸಾಮಥ್ರ್ಯ ಎಷ್ಟು ಮುಖ್ಯವೋ ನಾಟಕದ ಮಾಧ್ಯಮವೂ ಅಷ್ಟೇ ಮುಖ್ಯವೆಂದು ರಸಜ್ಞರ ಅಭಿಪ್ರಾಯ. ದೇವತೆಗಳನ್ನು, ಉನ್ನತ ವ್ಯಕ್ತಿಗಳನ್ನು ಕುರಿತ, ಉದಾತ್ತ ವಸ್ತುಗಳನ್ನುಳ್ಳ ಮತ್ತು ಮೇಳ, ಗೀತ ನಾಟ್ಯಗಳನ್ನೊಳಗೊಂಡ ನಾಟಕ ಸ್ವಾಭಾವಿಕವಾಗಿ ಛಂದಸ್ಸಿನ ಲಯದಿಂದ ಕೂಡಿರುತ್ತದೆ. ಆಮೇಲೆ ನಾಟಕೀಯ ಅಂಶಗಳು ಹೆಚ್ಚಿ ಲೋಕಸಹಜವಾದ ಗದ್ಯ, ಛಂದಸ್ಸು ಮತ್ತು ಗದ್ಯಮಿಶ್ರಣ, ಕಡೆಗೆ ಲೋಕ ಸ್ವಭಾವ, ಮಾನವ ಸಮಾಜದ ಚಿತ್ರಣಗಳನ್ನೇ ಒಳಗೊಂಡಿರುವ ಆಧುನಿಕ ನಾಟಕಗಳಲ್ಲಿ ಛಂದಸ್ಸು ಅಸ್ವಾಭಾವಿಕವೆಂದು ತಿರಸ್ಕøತವಾಗಿ ಬರಿಯ ಗದ್ಯಶೈಲಿ ಬಳಕೆಗೆ ಬಂದಿರುತ್ತದೆ. ಗ್ರೀಕ್ ನಾಟಕ ಬರಿಯ ಛಂದಸ್ಸೇ; ಸಂಸ್ಕøತ ನಾಟಕ ಗದ್ಯದ ಹಾಸು, ಪದ್ಯದ ಹೊಕ್ಕು. ಇಂಗ್ಲಿಷ್ ನಾಟಕ ಮಿಶ್ರಣದಲ್ಲಿ ಆರಂಭವಾಗಿ ಬರಿಯ ಗದ್ಯಕ್ಕೆ ಇಳಿದು ಪುನಃ ಕಾವ್ಯಮಯವಾಗುತ್ತದೆ. ಆಗ ನಾಟಕಕ್ಕೂ ಕವಿತೆಗೂ ಸಂಬಂಧವಿರ ಬೇಕೇ ಬೇಡವೇ ಎಂಬ ಪ್ರಶ್ನೆಯೂ ಏಳುತ್ತದೆ.

ಪಾಶ್ಚಾತ್ಯ ನಾಟಕದ ಜಾಡೂ ಹೀಗೆಯೇ. ಮೊಟ್ಟಮೊದಲು ನಾಟಕದ ಮಾತು--ಗಂಭೀರನಾಟಕವೇ ಆಗಲಿ, ವೈನೋದಿಕವೇ ಆಗಲಿ--ಭಾವಗೀತೆಯ ರಾಗಗಳ ರೂಪದಲ್ಲಿದ್ದು, ಸಂಗೀತ ಪ್ರಧಾನವಾಗಿ ಪದಶೈಲಿಯ ಮಾತುಗಳಾಗಿ ವಿಕಾಸಹೊಂದಿ, ಕೊನೆಗೆ ಸಾಮಾನ್ಯ ಜನರ ಭಾಷೆಯನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿತು. ಈ ರೀತಿಯ ಪ್ರಯೋಗವನ್ನು ನಾವು ಕ್ರಮವಾಗಿ ಈಸ್ಕಿಲಸ್, ಅರಿಸ್ಟೋಫೆನಿಸ್‍ರಿಂದ ಹಿಡಿದು ಮಿನಾಂಡರ್ ಮತ್ತು ಟೆರಿನ್ಸರವರೆಗೂ ಕಾಣಬಹುದು. ಮಧ್ಯಯುಗದಲ್ಲಿ ಹುಟ್ಟಿದ ಹೊಸ ನಾಟಕ ಬೆಳೆದ ರೀತಿಯೂ ಹೀಗೆಯೆ. ಪ್ರತಿಭಾವಂತರಾದ ನಾಟಕಕಾರರು ತೊಡಕಾದ ಪದ್ಯರೂಪದ ಸಂಭಾಷಣೆಯನ್ನು ಸುಲಭರೂಪಕ್ಕೆ ತಂದು ಅದನ್ನು ನಾಟಕಕ್ಕೆ ಜೋಡಿಸಿಕೊಂಡರು. ಅಂತ್ಯಪ್ರಾಸವುಳ್ಳ ದ್ವಿಪದಿಯ ಶೈಲಿ ಹೊಸಹುಟ್ಟಿನ ಕವಿಗಳ ಕೈಲಿ ಮಾರ್ಪಟ್ಟು ನಾಟಕದಲ್ಲಿ ಸರಳಗೆರೆಯಾಗಿ ಎಲಿಜûಬೆತ್ ಕಾಲದ ಅನಂತರ ಅವನತಿ ಹೊಂದಿ ಕ್ರಮೇಣ ಗದ್ಯವಾಯಿತು. ಈ ಮೊದಲು ಗದ್ಯಶೈಲಿಯನ್ನು ವಿನೋದ ನಾಟಕಗಳಲ್ಲಿ ಸಹಜವಾದ ಮಾಧ್ಯಮವಾಗಿ ಉಪಯೋಗಿಸುತ್ತಿದ್ದು, ಅನಂತರ ಗಂಭೀರ ನಾಟಕಗಳಲ್ಲಿಯೂ ಪ್ರಯೋಗಿಸಿದರು. ವಿನೋದ ನಾಟಕಗಳಲ್ಲಿ ಪದಶೈಲಿಯನ್ನು ಉಪಯೋಗಿಸುತ್ತಿದ್ದುದು ಅತಿ ವಿರಳ. 19ನೆಯ ಶತಮಾನದ ಆದಿಯಲ್ಲಿ ಬಂದ ಜೇಮ್ಸ್ ಷೆರಿಡನ್ ನವಲ್ಸ್‍ನ ಅನಂತರ ಪದ್ಯಶೈಲಿಯ ವಿನೋದ ನಾಟಕ (ಪೊಯಟಿಕ್ ಕಾಮಿಡಿ) ಅವನತಿ ಹೊಂದಿತು.

ಪದ್ಯಶೈಲಿಯ ಗಂಭೀರನಾಟಕದ (ಪೊಯಟಿಕ್ ಟ್ರಾಜೆಡಿ) ಇತಿಹಾಸ ಇದಕ್ಕಿಂತ ಸ್ವಲ್ಪ ಭಿನ್ನವಾಗಿದೆ. 18 ಮತ್ತು 19ನೆಯ ಶತಮಾನಗಳಲ್ಲಿ ಸಾಮಾನ್ಯವಾಗಿ ಎಲ್ಲ ನಾಟಕಕಾರರೂ ಪದ್ಯಶೈಲಿಯನ್ನೇ ಮಾಧ್ಯಮವಾಗಿ ಉಪಯೋಗಿಸಿದರು. 18ನೆಯ ಶತಮಾನದಲ್ಲಿ ಗ್ರೀಕರ ಅಭಿಜಾತ (ಕ್ಲಾಸಿಕಲ್) ಸಂಪ್ರದಾಯವನ್ನು ತಪ್ಪುತಪ್ಪಾಗಿ ಅನುಕರಿಸಿ ಸರಳರಗಳೆಯಲ್ಲಿ ಅನೇಕ ನಾಟಕಗಳನ್ನು ಬರೆದರು. 19ನೆಯ ಶತಮಾನದಲ್ಲಿ ಹೊಸದಾಗಿ ಬಂದ ರಮ್ಯಯುಗದ ಕವಿಗಳು ಷೇಕ್ಸ್‍ಪಿಯರನ ಕಾವ್ಯ ಶೈಲಿಯನ್ನು ಅನುಸರಿಸಿದರು. ಆದರೆ ಈ ಎರಡು ಶತಮಾನದ ಕಾಲದಲ್ಲಿ ರಚಿತವಾದ ಯಾವ ನಾಟಕವೂ ರಂಗಭೂಮಿಯ ಹಾಗೂ ಕಲೆಯ ದೃಷ್ಟಿಯಿಂದ ಅಷ್ಟೊಂದು ಯಶಸ್ವಿಯಾಗಲಿಲ್ಲ. ಆದರೂ ಆ ಕಾಲದ ಸಾಹಿತಿಗಳ ನಾಟಕಕ್ಕೆ ಪದ್ಯಶೈಲಿಯೇ ಪರಿಣಾಮಕಾರಿಯಾದ, ಯುಕ್ತವಾದ ಶೈಲಿಯೆಂದು ಭಾವಿಸಿ, ಅಡಿಸನ್, ಜಾನ್ಸನ್, ವಡ್ರ್ಸ್‍ವರ್ತ್, ಷೆಲ್ಲಿ, ಬೈರನ್, ಟೆನಿಸನ್, ಬ್ರೌನಿಂಗ್ ಮತ್ತು ಸ್ಟೀಫನ್ ಫಿಲಿಪ್ಸ್ ಮುಂತಾದವರು ಕಾವ್ಯರೂಪಕಗಳನ್ನು ರಚಿಸಿದರು. ಇದೇ ಕಾಲದಲ್ಲಿ ಯುರೋಪಿನ ನಾನಾ ದೇಶಗಳಲ್ಲಿಯೂ ಈ ಅಭಿಪ್ರಾಯ ಹರಡಿತು. ಫ್ರಾನ್ಸಿನಲ್ಲಿ ರಾಸಿನ್ ಅಲೆಕ್ಸಾಂಡ್ರೈಸ್ ಎಂಬ ಆರು ಗಣಗಳ ಸಾಲಿನ ಶೈಲಿಯನ್ನು ನಾಟಕದಲ್ಲಿ ಎಷ್ಟು ಯಶಸ್ವಿಯಾಗಿ ಉಪಯೋಗಿಸಬಹುದೆಂದು ತೋರಿಸಿದ. ಅನಂತರ ಜರ್ಮನಿಯ ಗಯಟೆಯನ್ನು ಹೆಸರಿಸಬೇಕು. ಷಿಲ್ಲರ್ ತನ್ನ ರಮ್ಯ (ರೊಮ್ಯಾಂಟಿಕ್) ಐತಿಹಾಸಿಕ ನಾಟಕಗಳಲ್ಲಿ ಕಾವ್ಯಮಾಧ್ಯಮವನ್ನೇ ಬಳಸಿದ. ಇಟಲಿಯ ಆಲ್‍ಫೆರಿ ಗ್ರೀಕ್ ನಾಟಕದ ಸಂಪ್ರದಾಯವನ್ನು ತನ್ನ ಕಾವ್ಯರೂಪಗಳಲ್ಲಿ ಅನುಕರಿಸಿದ. ಸ್ಕಾಂಡಿನೇವಿಯದ ಇಬ್ಸನ್ ಮತ್ತು ಸ್ಟ್ರಿಂಡ್ ಬ್ಯಾರಿ ಮೊದಲು ಕಾವ್ಯರೂಪಕಗಳನ್ನು ರಚಿಸಿದರು.

ಈ ಪ್ರಯತ್ನಗಳಾವುವೂ ಷೇಕ್ಸಪಿಯರನ ಕಾವ್ಯರೂಪಕಗಳಿಗೆ ಸರಿಸಮನಾಗಲಿಲ್ಲ. ಕಾವ್ಯರೂಪಕವನ್ನು ಉತ್ತುಂಗ ಶಿಖರಕ್ಕೇರಿಸಿದ ಷೇಕ್ಸಪಿಯರ್‍ನ ಸಾಧನೆಯನ್ನು ಇತರರ ಪ್ರಯೋಗಗಳೊಡನೆ ಹೋಲಿಸಿದಾಗ ಇಷ್ಟು ವಿಷಯ ಸ್ಪಷ್ಟವಾಗುತ್ತದೆ:

1 ನಾಟಕದಲ್ಲಿನ ಕೆಲವು ತೀವ್ರವಾದ, ಸೂಕ್ಷವಾದ ಭಾವನೆಗಳನ್ನು ಅಭಿವ್ಯಕ್ತಗೊಳಿಸಲು ಗದ್ಯಶೈಲಿ ಅಶಕ್ತವಾಗುತ್ತದೆ.

2 ಇಂಥ ಉದ್ದೇಶ ನೆರವೇರಲು, ವಿಭಾವನೆಯ, ಉನ್ನತವಾದ ಶೈಲಿ, ಅಂದರೆ ಕಾವ್ಯಶೈಲಿ ಅತ್ಯಗತ್ಯ. ಅಲ್ಲದೆ ನಾಟಕಗಳಲ್ಲಿ ಬಳಸುವ ಈ ಉನ್ನತ ಶೈಲಿ ಯಶಸ್ವಿಯಾಗಿ ನಾಟಕಕ್ಕೆ ಹೊಂದಿಕೊಳ್ಳಬೇಕಾದರೆ ಅದು ಆಯಾ ಕಾಲದ ಸಾಮಾನ್ಯ ಜನ ಆಡುವ ಮಾತಿನ ಶೈಲಿಗೆ ಸಂಬಂಧಿಸಿದಂತಿರಬೇಕು.

3 ಕೇವಲ ಪ್ರಾಚೀನ ನಾಟಕಗಳ ಶೈಲಿಯನ್ನು ಅನುಕರಿಸುವುದರಿಂದ ರಂಗಭೂಮಿಗೆ ಬೇಕಾದ ಇಂಥ ನಾಟಕಶೈಲಿಯನ್ನು ಸಾಧಿಸಿಕೊಳ್ಳಲು ಸಾಧ್ಯವಿಲ್ಲ.

4 ನಾಟಕದ ಸಂಭಾಷಣೆ ಮಾತ್ರ ಕಾವ್ಯಶೈಲಿಯಲ್ಲಿದ್ದರೆ ಅದು ಕಾವ್ಯರೂಪಕವಾಗುವುದಿಲ್ಲ. ಇಡೀ ನಾಟಕಗಳಲ್ಲಿ ವಿಭಾವನೆಯಿರಬೇಕು. ಕಾವ್ಯತ್ವವಿರಬೇಕು. ಷೇಕ್ಸ್‍ಪಿಯರ್‍ನ ಸರಳರಗಳೆಯ ಹಿರಿಯ ಲಕ್ಷಣವೆಂದರೆ ಅದು ಅವನ ಕಾಲದ ಮಾತಿನ ಶೈಲಿಯಿಂದ ವಿಭಿನ್ನವಾಗದೆ ಅದರೊಡನೆ ಛಂದೋಮಯವಾಗಿ ಹೊಂದಿಕೊಂಡಿರುವುದು. ರಮ್ಯ ಕವಿಗಳು, ಷೇಕ್ಸ್‍ಪಿಯರನ ಛಂದಸ್ಸನ್ನು ಅನುಕರಣೆ ಮಾಡಿದಾಗ ಅವರ ಶೈಲಿ ಶಿಥಿಲವಾಗಿ, ಮಾತುಗಳು ಜೊಳ್ಳಾಗಿ, ಸಪ್ಪೆಯಾಗಿ ತೋರಿದುವು. ತಮ್ಮ ತಮ್ಮ ಕಾಲದ ಜನರು ಆಡುವ ಮಾತಿನ ನಡೆಯನ್ನು ಬಿಟ್ಟು ಕೇವಲ ಅಂಧಾನುಕರಣೆಯ ಮಾರ್ಗವನ್ನು ಅನುಸರಿಸಿದಾಗ ಈ ಕವಿಗಳು ಮುಗ್ಗರಿಸಿದರು. ನಾಟಕದ ಮಾತಿನ ಶೈಲಿಗೂ ಆಯಾ ಕಾಲದ ಜನರಾಡುವ ಮಾತಿಗೂ ಇರುವ ನಿಕಟಸಂಬಂಧ ಇದರಿಂದ ವ್ಯಕ್ತವಾಗುವುದು.

ಇದನ್ನು ಚೆನ್ನಾಗಿ ಮನಗಂಡು ಈ ಕಾಲದ ಕವಿಗಳಲ್ಲಿ ಕೆಲವರು ಹೊಸರೀತಿಯಲ್ಲಿ ಕಾವ್ಯರೂಪಕಗಳನ್ನು ರಚಿಸಲು ಯತ್ನಿಸಿದ್ದಾರೆ. ಅವರಲ್ಲಿ ಕೆಲವರು ಎರಡು ರೀತಿಯ ತೊಡಕುಗಳಿಗೆ ಸಿಕ್ಕಿದ್ದಾರೆ. ನಾಟಕದ ಮಾತಿನ ಶೈಲಿ, ಜನರ ಮಾತನ್ನು ಹೋಲಬೇಕಾದರೆ ಅದು ಆಯಾ ಕಾಲದಲ್ಲಿ ಬಳಕೆಯಲ್ಲಿರುವ ಕಾವ್ಯರೂಪಗಳಿಗೆ (ಪೊಯಟಿಕ್ ಫಾರಂ) ಹೊಂದಿಕೊಳ್ಳುವಂತಿರಬೇಕು. ಷೇಕ್ಸ್‍ಪಿಯರ್ ಒಂದು ರೀತಿಯ ಅದೃಷ್ಟಶಾಲಿ. ಅವನ ಶೈಲಿಯಲ್ಲಿ ಆ ಕಾಲದ ಜನರ ಮಾತಿನ ಲಯದ ಪ್ರತಿಧ್ವನಿಯಿದೆ. ರಂಗಭೂಮಿಯ ಮೇಲೆ ನಟರ ಬಾಯಿಂದ ಹೊರಟ ಮಾತುಗಳು ಕೂಡಲೇ ಪ್ರೇಕ್ಷಕರ ಅಂತಃಕರಣವನ್ನು ಹೊಕ್ಕು, ಮಾತಿನ ಅರ್ಥ ತಾನಾಗಿ ಹೊಳೆಯಬೇಕು. ಹೀಗೆ ತನ್ನ ಹೊರ ಪೊರೆಯಲ್ಲಿನ ಅರ್ಥವನ್ನು ಸುಲಭವಾಗಿ ಮಿಂಚಿಸಬಲ್ಲ ಶಕ್ತಿ ಎಲಿಜûಬೆತ್ ಕಾಲದ ಇಂಗ್ಲಿಷ್ ಭಾಷೆಯ ವಿಶಿಷ್ಟ ಗುಣವಾಗಿತ್ತು. ಆದ್ದರಿಂದ ಆ ಭಾಷೆಯನ್ನು ರಂಗಭೂಮಿಯ ಮಾಧ್ಯಮವಾಗಿ ಅಳವಡಿಸಿಕೊಳ್ಳಲು ಷೇಕ್ಸ್‍ಪಿಯರನಿಗೆ ಸುಲಭಸಾಧ್ಯವಾಯಿತು. ಆದರೆ ಇದು ಆಧುನಿಕ ಕವಿಗಳಿಗೆ, ನಾಟಕಕಾರರಿಗೆ ಎಟುಕದ ಸಮಸ್ಯೆಯಾಗಿದೆ. ಏಕೆಂದರೆ ಆಧುನಿಕ ಕಾವ್ಯ ಕ್ಲಿಷ್ಟವಾಗುತ್ತ ಬಂದು ಸಾಮಾನ್ಯ ಜನರಿಂದ ದೂರವಾಗುತ್ತಿದೆ. ಕಾವ್ಯರೂಪಗಳನ್ನು ರಚಿಸಬೇಕೆನ್ನುವ. ನಾಟಕಕಾರ ಈಗಿನ ತನ್ನ ಕಾಲದ ಕಾವ್ಯದ ಕ್ಲಿಷ್ಟ ಶೈಲಿಯನ್ನು ಅನುಸರಿಸುವಂತಿಲ್ಲ; ತನ್ನ ಕಾಲದ ಜನರ ಮಾತಿನ ಶೈಲಿಯನ್ನೂ ಅನುಸರಿಸುವಂತಿಲ್ಲ: ಇದಕ್ಕೆ ಕಾರಣ, ಪ್ರಸ್ತುತ ಕಾಲದ ಸಾಮಾನ್ಯ ಜನರ ಮಾತು ವೈವಿಧ್ಯರಹಿತವಾಗಿದೆ, ಶುಷ್ಕವಾಗಿದೆ. ಅದರ ವೈವಿಧ್ಯರಾಹಿತ್ಯ ಬೇಸರ ತರುವಂಥದ್ದು. ಷೇಕ್ಸ್‍ಪಿಯರನ ಕಾಲದ ಜನರ ಮಾತಿನಲ್ಲಿದ್ದ ಅರ್ಥವೈಶಾಲ್ಯ, ಲಯ, ಗತಿ, ಅಲಂಕಾರ, ವೈವಿಧ್ಯ- ಯಂತ್ರಯುಗದ ಆಧುನಿಕ ಕಾಲದ ಜನರ ಮಾತಿನಲ್ಲಿಲ್ಲ. ಆದ್ದರಿಂದ ಆಧುನಿಕ ಕಾವ್ಯರೂಪಕಗಳನ್ನು ರಚಿಸಬೇಕೆನ್ನುವ ಕವಿಗೆ ಇದೊಂದು ಬಗೆಹರಿಯದ ಸಮಸ್ಯೆ.

 ಇದಕ್ಕೆ ಪರಿಹಾರವನ್ನು ಹುಡುಕಲು ಅನೇಕ ನಾಟಕಕಾರರು ಪ್ರಯೋಗಗಳನ್ನು ಮಾಡಿದ್ದಾರೆ. ಈ ಶತಮಾನದ ಇಂಗ್ಲೆಂಡಿನಲ್ಲಿ ಈ ಪ್ರಯತ್ನಗಳು ಹೆಚ್ಚು ಯಶಸ್ವಿಯಾಗಿವೆ. ಅನೇಕ ವರ್ಷಗಳ ಕೃಷಿಯ ಫಲವಾಗಿ ಟಿ. ಎಸ್. ಎಲಿಯಟ್, ಡುಬ್ಲ್ಯೂ. ಬಿ. ಯೇಟ್ಸ್, ಕ್ರಿಸ್ಟಫರ್ ಫ್ರೈ, ಕ್ರಿಸ್ಟಫರ್ ಇಷರ್‍ವುಡ್ ಮುಂತಾದ ನಾಟಕಕಾರ ಕವಿಗಳು ಹಲವಾರು ಕಾವ್ಯರೂಪಕಗಳನ್ನು ರಚಿಸಿ ಜನಮನ್ನಣೆ ಪಡೆದಿದ್ದಾರೆ. ಆದರೆ ಎಲೆಜûಬೆತ್ ಕಾಲದ ನಾಟಕಕಾರರಿಗೆ ಸಿದ್ಧಿಸಿದ ಸರಳ ರಗಳೆಯಂಥ ಪ್ರಭಾವಶಾಲಿ ಕಾವ್ಯಮಾಧ್ಯಮವನ್ನು ಈ ಕಾಲದ ನಾಟಕಕಾರರು ಯಾರೂ ಇನ್ನೂ ಸಾಧಿಸಿಕೊಂಡಿಲ್ಲವೆಂದು ಹೇಳಬಹುದು.    (ಎಚ್.ಕೆ.ಆರ್.)

 ಕಾವ್ಯ ರೂಪಕ, ಪದ್ಯ ಮಾಧ್ಯಮದಲ್ಲಿ ರಚಿಸಿದ ನಾಟಕವಷ್ಟೇ ಅಲ್ಲ. ಅದು ಯಶಸ್ವಿಯಾಗಬೇಕಾದರೆ ಅದನ್ನು ರಚಿಸುವ ಮನಸ್ಸು ಕವಿ ಮನಸ್ಸಾಗಿರಬೇಕು. ಕಾವ್ಯದ ಪ್ರವೃತ್ತಿ ಎಂದರೆ ವಿವರಗಳ ಮೂಲಕ ತರ್ಕಾತೀತವಾದ, ತನ್ನದೇ ಆದ ವಿಶಿಷ್ಟ ಸ್ವರೂಪವಿರುವ ಸುಸಂಬದ್ಧ ಜಗತ್ತನ್ನು ಸೃಷ್ಟಿಸುವುದು. ಆದುದರಿಂದಲೇ ಕಾವ್ಯದ ಭಾಷೆ ಪ್ರತಿಮೆಗಳ ಭಾಷೆ ಪ್ರತಿಮೆಯು ಜಡಜಗತ್ತಿಗೂ `ಇಮ್ಯಾಜಿನೇಷನ್'ನ ಜಗತ್ತಿಗೂ ಕಟ್ಟಿದ ಸೇತುವೆ. ಕಾವ್ಯವು ಲಯದ ಮೂಲಕ, ಪ್ರತಿಮೆಗಳ ಮೂಲಕ (ಉದಾ: ಬೇಂದ್ರೆಯವರ ರಚನೆಯ ಮೂಲಕ ಕಣ್ಣ ಮುಂದಿರುವ ದೃಶ್ಯದ ಹಿಂದೆ ಒಂದು ಸುಸಂಬದ್ಧ ಜಗತ್ತಿನ ಇರುವಿಕೆಯನ್ನು ಸೂಚಿಸುತ್ತಿರುತ್ತದೆ. ಆದುದರಿಂದಲೇ ಅತ್ಯಂತ ದುಃಖವನ್ನು ವ್ಯಕ್ತಪಡಿಸುವ ಉದಾ: ಬೇಂದ್ರೆಯವರ ಒಳ್ಳೆಯ ಕವನವು ದುಃಖವನ್ನು ಸಹ್ಯ ಮಾಡುತ್ತದೆ. ಅಡಿಗರ `ಮೋಹನ ಮುರಳಿ'ಯಲ್ಲಿ ಗದ್ಯ ಸಾರಾಂಶವು ನಮ್ಮ ಮೇಲೆ ಯಾವ ಪರಿಣಾಮವನ್ನುಂಟು ಮಾಡುತ್ತದೆ? ಷೇಕ್ಸ್‍ಪಿಯರನ `ಆ್ಯಂಟಿನಿ ಅಂಡ್ ಕ್ಲಿಯೊ ಪೇಟ್ರ' `ಅಥೆಲೊ' ಮೊದಲಾದ ನಾಟಕಗಳಲ್ಲಿ ಯಾತನೆಯನ್ನು ಸಹ್ಯ ಮಾಡುವುದು, ಯಾತನೆಯು ಯಾತನೆಯಾಗಿಯೇ ಸಂವಹನವಾಗದಂತೆ ಮಾಡುವ ಹಲವು ಅಂಶಗಳಲ್ಲಿ ಅವುಗಳ ಕಾವ್ಯ ಒಂದು ಕನ್ನಡದಲ್ಲಿ ಕಾವ್ಯರೂಪಕ್ಕೆ ಒಳ್ಳೆಯ ಉದಾಹರಣೆ ಕುವೆಂಪು ಅವರ `ಬೆರಳ್-ಗೆ-ಕೊರಳ್'. ನಮ್ಮ ಕಣ್ಣ ಮುಂದೆಯೇ ಭಯಂಕರ ಅನ್ಯಾಯ ನಡೆದು ಹೋಗುತ್ತದೆ. ಆದರೆ ನಾಟಕ ನಮ್ಮನ್ನು ಹತಾಶರನ್ನಾಗಿ ಬಿಡುವುದಿಲ್ಲ. ಇದಕ್ಕೆ ಏಕಲವ್ಯನ ಸ್ವಭಾವದಂತಹ ಕೆಲವು ಅಂಶಗಳು ಕಾರಣ. ಒಂದು ಮುಖ್ಯ ಕಾರಣ ನಾಟಕದ ಕಾವ್ಯ ಕಾವ್ಯವು ಸಹಜವಾಗಿ ವಿವರಗಳಾಚೆ ಒಂದು ಸುಸಂಬದ್ಧ ದರ್ಶನದತ್ತ ಸಾಗುತ್ತದೆ. (ಸಾಹಿತ್ಯ ತಿಳಿಯದಿದ್ದರೂ ಸಂಗೀತ ವಾದ್ಯಗಳು ಮಾಡುವ ಪರಿಣಾಮದೊಂದಿಗೆ ಹೋಲಿಸಿ). ಇದರಿಂದಾಗಿ ನಾಟಕದಲ್ಲಿ ಅಂತರ್ಗವಾದ ದರ್ಶನವು ಇನ್ನೂ ಸ್ಥೂಲವಾಗಿ, ಪರಿಣಾಮಕಾರಿಯಾಗಿ ಪ್ರಕಟವಾಗುವುದು ಸಾಧ್ಯವಾಗುತ್ತದೆ.

           

(ಪರಿಷ್ಕರಣೆ: ಎಲ್.ಎಸ್.ಶೇಷಗಿರಿರಾವ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ